ಪಿಯೋನಿಯ   
ರಾನನ್‍ಕ್ಯುಲೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ.  ಹಿಮಾಲಯ ಪರ್ವತ ಶ್ರೇಣಿ, ಸಮಶೀತೋಷ್ಣವಲಯದ ಉತ್ತರ ಭಾಗ.  ಭೂಮಧ್ಯ ಸಮುದ್ರದ ಪ್ರದೇಶ ಮತ್ತು ಏಷ್ಯದ ಹಲವೆಡೆಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.  ಇದರ ಹೂಗಳು ದೊಡ್ಡ ಗಾತ್ರದವಾಗಿದ್ದು ವಾಸನೆ ಮತ್ತು ಬಣ್ಣದಲ್ಲಿ ಗುಲಾಬಿ ಹೂಗಳನ್ನು ಹೋಲುತ್ತವೆ.  ಈ ಕಾರಣದಿಂದ ಈ ಗಿಡಗಳನ್ನು ಉದ್ಯಾನವನಗಳಲ್ಲಿ ಮತ್ತು ಮನೆಗಳಲ್ಲಿ ಬೆಳೆಸುವುದಿದೆ.  ಫಲವತ್ತಾದ ಮರಳು ಮಿಶ್ರಿತ ಗೋಡುಭೂಮಿ ಈ ಬೆಳೆಗೆ ಪ್ರಶಸ್ತವಾದುದು.

	ಕಾಶ್ಮೀರ ಕಣಿವೆಯಿಂದ ಕುಮಾಂವ್ ಕಣಿವೆಯವರೆಗಿನ 2000-3000 ಮೀ. ಎತ್ತರದ ಪ್ರದೇಶದಲ್ಲಿ ಅಲಂಕಾರಕ್ಕಾಗಿ ಬೆಳೆಯುತ್ತಾರೆ.

	ಪಿಯೋನಿಯ ಮೂಲಿಕೆ ಸಸ್ಯವಾಗಿ ಅಥವಾ ಪೊದೆ ಸಸ್ಯವಾಗಿ ಎರಡು ಬಗೆಯಲ್ಲಿ ಬೆಳೆಯುತ್ತದೆ : ಬೇರುಗೆಡ್ಡೆಯಾಕಾರದಲ್ಲಿದೆ.  ಎಲೆಗಳು ಸಂಯುಕ್ತ ಮಾದರಿಯವು.  ಹೂಗಳು ದೊಡ್ಡ ಗಾತ್ರದವು ಒಂಟೊಂಟಿಯಾಗಿ ರೆಂಬೆಗಳ ತುದಿಗಳಲ್ಲಿ ಅರಳುತ್ತವೆ.  ಇವುಗಳ ಬಣ್ಣ ಸಾಮಾನ್ಯವಾಗಿ ಕೆಂಪು, ಊದಾ ಇಲ್ಲವೇ ಬಿಳಿ.  ಪ್ರತಿ ಹೂವಿನಲ್ಲಿ ಐದು ಪತ್ರಗಳು,  5-10 ದಳಗಳು, ಅನೇಕ ಕೇಸರಗಳು.  2-5 ಕಾರ್ಪೆಲುಗಳು ಅಂಡಾಶಯ ಉಂಟು.  ಕಾಯಿಯಲ್ಲೂ ಪತ್ರ ಉಳಿದಿರುತ್ತದೆ.  

	ಪಿಯೋನಿಯದ ಎಳೆಯ ಕಾಂಡಗಳನ್ನು ತರಕಾರಿಯಾಗಿ ಉಪಯೋಗಿಸುವುದಿದೆ.  ಭೇದಿಯನ್ನು ನಿಲ್ಲಿಸಲು ಇದರ ಎಲೆಗಳ ಕಷಾಯವನ್ನು ಕೊಡುವುದುಂಟು.  ಗರ್ಭಕೋಶ ರೋಗ, ಪಿತ್ತಕೋಶರೋಗ, ನರಗಳ ತೊಂದರೆ ಮುಂತಾದ ರೋಗಗಳಿಗೆ ಬೇರುಗೆಡ್ಡೆಗಳಿಂದ ತಯಾರಿಸಿದ ಔóಷಧಿ ಉತ್ತಮ ಎನ್ನಲಾಗಿದೆ.  ಆದರೆ ಈ ಔಷಧಿಯನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ತಲೆನೋವು, ದೃಷ್ಟಿಮಾಂದ್ಯ ಮತ್ತು ವಾಂತಿ ಮೊದಲಾದವು ಬರುವ ಸಂಭವವಿದೆ.

	ಪಿಯೋನಿಯದಲ್ಲಿ ಸುಮಾರು 25 ಪ್ರಭೇದಗಳುಂಟು.  ಇವುಗಳಲ್ಲಿ ಮುಖ್ಯವಾದವು ಇಂತಿವೆ: ಲೂಟಿಯ, ಭ್ರೌನಿಯೈ, ಸಫ್ರೂಟಿಕೋಸ, ಆಲ್ಬಿಫ್ಲೋರ, ಟೆನ್ಯೂಫೋಲಿಯ ಅಫಿಸಿನ್ಯಾಲಿಸ್, ಪೆರೆಗ್ರೀನ, ಪ್ಯಾರಾಡಾಕ್ಸ್ ಹಾಗೂ ಡಕೋರ.
(ಎಚ್.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ